ಹುಬ್ಬಳ್ಳಿ: ಭಾರತೀಯ ಅಯ್ಯಪ್ಪ ಸೇವಾ ಸಂಘದ ವತಿಯಿಂದ ಅಯ್ಯಪ್ಪ ಮಹಾಸಂಗಮ ಕಾರ್ಯಕ್ರಮವನ್ನು ಡಿಸೆಂಬರ್ ೧೮ ರಂದು ನಗರದ ಭೈರಿದೇವರಕೊಪ್ಪದ ಎಪಿಎಂಸಿ ಎರಡನೇ ಗೇಟ್ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಬಾರ್ಕಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆ. ೭ ಗಂಟೆಗೆ ಕುಂಭ ಕಳಸದೊಂದಿಗೆ ಅಯ್ಯಪ್ಪಸ್ವಾಮಿಯವರ ಉತ್ಸವ ಮೂರ್ತಿ ಮೆರವಣಿಗೆಯು ಭೈರಿದೇವರಕೊಪ್ಪ ಅಯ್ಯಪ್ಪಸ್ವಾಮಿ ಸನ್ನಿಧಾನದಿಂದ ಎಪಿಎಂಸಿ ಯಲ್ಲಿ ನಡೆಯುವ ಅಯ್ಯಪ್ಪಸ್ವಾಮಿ ಪೂಜಾಮಂಟಪದವರೆಗೆ ಇರಲಿದೆ. ಬೆ. ೧೦ ಗಂಟೆಗೆ ಭಕ್ತಿ ಸಂಗಮ, ಪ್ರಾರ್ಥನೆ, ಸ್ವಾಗತ, ಶ್ರೀಗಳಿಗೆ ಸನ್ಮಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇರಲಿವೆ ಎಂದರು.