ಹುಬ್ಬಳ್ಳಿ: ಸಹಜ ಯೋಗ ಧ್ಯಾನ ಸಂಸ್ಥೆಯ ವತಿಯಿಂದ ಡಿ.೧೯ ರಂದು ಸಂಜೆ ೫ಕ್ಕೆ ಗೋಕುಲ್ ರಸ್ತೆಯ ಹವ್ಯಕ ಸಭಾಭವನದಲ್ಲಿ ಉಚಿತ ಧ್ಯಾನ ಶಿಬಿರ ಹಾಗೂ ರಷ್ಯಾದ ಸಹಜ ಯೋಗಿಗಳಿಂದ ಆತ್ಮಾನುಭವ ಸಂಗೀತ-ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಚಾಲಕಿ ಡಾ. ಪುಷ್ಪಾ ಪಾಣಿಗಟ್ಟಿ ಹೇಳಿದರು. ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೪೦ ರಷ್ಯಾದ ಯೋಗಿಗಳು ದೇಶಾದ್ಯಂತ ಪ್ರವಾಸ ಕೈಗೊಂಡು ಸಹಜ ಯೋಗದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು. ಡಿ.೧೮ ರಂದು ಅವರು ಕಲಘಟಗಿಗೆ ಭೇಟಿ ನೀಡಿ ಅಲ್ಲಿ ಸಹ ಧ್ಯಾನ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ನಡೆಸಲಿದ್ದಾರೆ.