ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿ ಹಬ್ಬ ಅಂದರೆ ವರ್ಷದ ಆರಂಭ. ಅದರಲ್ಲೂ ರೈತಾಪಿ ವರ್ಗದ ಜನರಿಗೆ ಕೃಷಿ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿ ಬರೆಯುವ ದಿನ. ಈ ಹಿನ್ನೆಲೆಯಲ್ಲಿ ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಅವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದ ತಮ್ಮ ಜಮೀನಿನಲ್ಲಿ ನೇಗಿಲು ಹೊಡೆಯುವ ಮೂಲಕ ವರ್ಷದ ಕೃಷಿ ಚಟುವಟಿಕೆ ಆರಂಭಕ್ಕೆ ಮುನ್ನುಡಿ ಬರೆದರು. ಭಾನುವಾರ ಬೆಳಿಗ್ಗೆ ಹನ್ನೊಂದೂವರೆ ಗಂಟೆಗೆ ಭೂಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನೇಗಿಲು ಹೊಡೆದು ಕೃಷಿ ಚಟುವಟಿಕೆ ಆರಂಭಿಸಿದರು. ಶಾಸಕ ಯು.ಬಿ.ಬಣಕಾರ ಅವರ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು