ಹೊಸದುರ್ಗ :ತಾಲ್ಲೂಕಿನಾದ್ಯಂತ ಕಡಲೆ ಬೆಳೆಗೆ ಸೊರಗು ರೋಗ ಆವರಿಸಿದ್ದು, ಬೆಳೆಯೆಲ್ಲ ಸಂಪೂರ್ಣ ಇಳುವರಿ ಕುಂಠಿತವಾಗಿದೆ. ಈರುಳ್ಳಿ ಬೆಳೆಯಿಂದ ನಷ್ಟ ಅನುಭವಿಸಿದ್ದ ರೈತರು, ಕಡಲೆ ಬಿತ್ತನೆಗೆ ಮುಂದಾಗಿದ್ದರು. ಆದರೀಗ ಕಡಲೆ ಬೆಳೆಯೂ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ.ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬರಲಿಲ್ಲ. ಬೆಳೆಗಳ ಕೊಯ್ದು ಹಂತದಲ್ಲಿ ಮಳೆಯಾದ ಪರಿಣಾಮ ಮುಂಗಾರು ಬೆಳೆಯಿಂದ ರೈತರು ಆದಾಯ ಪಡೆಯಲು ಆಗಲಿಲ್ಲ. ಹಿಂಗಾರು ಹಂಗಾಮಿನ ಪ್ರಮುಖ ಬೆಳೆ ಕಡಲೆ ಉತ್ತಮ ಆದಾಯ ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು, ಕಡಲೆಗೆ ಸೊರಗು ರೋಗ ಹಾಗೂ ಕಾಯಿಕೊರಕ ಹುಳು ಆವರಿಸಿರುವುದರಿಂದ ಕಂಗಾಲಾಗಿದ್ದಾರೆ.