ರಾಯಚೂರು ಜಿಲ್ಲೆಯ ಬಿಚ್ಚಾಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬಿ.ಯದ್ಲಾಪೂರ ಗ್ರಾಮದಲ್ಲಿ ಗುರುವಾರ 9 ಗಂಟೆಗೆ ಬೆಳಗ್ಗೆ ದಾರುಣ ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ಸಂಜೀವ ಗಟ್ಟುಬಿಚ್ಚಾಲಿ ಹೊಲಕ್ಕೆ ತೆರಳುವ ಸಂದರ್ಭದಲ್ಲಿ ರೈಲು ಹಳಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ಗೂಡ್ಸ್ ರೈಲು ಡಿಕ್ಕಿ ಹೊಡೆದು ಘಟನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರತಿದಿನದಂತೆ ತಮ್ಮ ಹೊಲದ ಕಡೆ ಹೊರಟಿದ್ದ ಸಂಜೀವ ಅವರು ಹಳಿ ದಾಟುವ ವೇಳೆ ರೈಲು ಬರುತ್ತಿರುವುದನ್ನು ಗಮನಿಸದೆ ಮುಂದೆ ಸಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ರೈಲು ನಿಲ್ದಾಣ ಅಧಿಕಾರಿಗಳು ಹಾಗೂ ರೈಲು ಪೊಲೀಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.