ನ್ಯಾಮತಿ: ಬಂಜಾರ ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಸೂರಗೊಂಡನಕೊಪ್ಪದಲ್ಲಿ ಸಚಿವ ಮಹದೇವಪ್ಪ
ಶ್ರಮಜೀವಿ ಬಂಜಾರ ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಭಾಯಾಗಡ್ ನಲ್ಲಿ ಬರುವ ಶೈಕ್ಷಣಿಕ ಸಾಲಿನಿಂದ ವಸತಿ ಶಾಲೆ ಪ್ರಾರಂಭಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವರಾದ ಡಾ: ಹೆಚ್.ಸಿ.ಮಹದೇವಪ್ಪ ಹೇಳಿದರು. ಅವರು ಶುಕ್ರವಾರ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್‌ನಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಂಡಾ ಅಭಿವೃದ್ದಿ ನಿಗಮದಿಂದ ಏರ್ಪಡಿಸಲಾದ ಸಂತ ಸೇವಾಲಾಲ್ ರವರ 286 ನೇ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.