ಬೆಂಗಳೂರಿನ ಮಹದೇವಪುರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದೇ ಇರುವ ವಾಣಿಜ್ಯ ಬಳಕೆ ಕಟ್ಟಡಗಳಿಗೆ ಸೋಮವಾರ ಸೀಲಿಂಗ್ ಮಾಡುವ ಮೂಲಕ ಬಿಸಿ ಮುಟ್ಟಿಸಲಾಯಿತು. ಆಯುಕ್ತರಾದ ಡಿ.ಎಸ್. ರಮೇಶ್ ಮಾರ್ಗದರ್ಶನದಂತೆ ಬಹು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಇದ್ದ ವಸತಿಯೇತರ ಬಳಕೆಯ ಬ್ಯಾಂಕ್, ಹೋಟೆಲ್, ವಾಣಿಜ್ಯ ಸಂಕೀರ್ಣ ಆಸ್ತಿಗಳನ್ನು ಸೀಲಿಂಗ್ ಮಾಡುವ ಮೂಲಕ ಬಾಕಿದಾರರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಯಿತು. ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಆಯುಕ್ತರು ತಿಳಿಸಿದ್ದು, ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸುವಂತೆ ಈ ಮೂಲಕ ಮನವಿ ಮಾಡಲಾಗಿದೆ.