ಶಿವಮೊಗ್ಗ: ರಾಗಿಗುಡ್ಡ, ಕುವೆಂಪು ನಗರದ ಸುತ್ತಮುತ್ತ ಚಿರತೆ ಪ್ರತ್ಯಕ್ಷ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಶಿವಮೊಗ್ಗದ ರಾಗಿಗುಡ್ಡ ಕುವೆಂಪುನಗರದ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿದ್ದು ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಿವಮೊಗ್ಗದ ಹೊರವಲಯದಲ್ಲಿ ಇರುವಂತಹ ರಾಗಿಗುಡ್ಡ ಕುವೆಂಪು ನಗರದ ಸುತ್ತಮುತ್ತ ಸ್ಥಳೀಯರು ತಿಳಿಸುವ ಪ್ರಕಾರ ಚಿರತೆ ಪ್ರತ್ಯಕ್ಷವಾಗಿತ್ತು. ಆದರೆ ಖಚಿತ ಮಾಹಿತಿ ಇರಲ್ಲಿಲ್ಲ. ಸೋಮವಾರ ರಾತ್ರಿ ಸ್ಥಳೀಯ ನಿವಾಸಿ ಒಬ್ಬರ ಮನೆ ಮುಂಭಾಗ ಅಳವಡಿಸಿರುವ ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆಯಾಗಿದ್ದು,ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೇ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.