ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ತಡೆಗಟ್ಟಿ, ಆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಭಾನುವಾರ ನಡೆದ 'ಹಿರಿಯ ಪೊಲೀಸ್ ಅಧಿಕಾರಿಗಳ 2ನೇ ದಿನದ ಸಮಾವೇಶ'ದಲ್ಲಿ ಪಾಲ್ಗೊಂಡು ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಸಮಾವೇಶದಲ್ಲಿ ಜನದಟ್ಟಣೆ ನಿಯಂತ್ರಣ, ಸೈಬರ್ ಕ್ರೈಂ, ಭಯೋತ್ಪಾದನಾ ಚಟುವಟಿಕೆ, ಡ್ರಗ್ಸ್ ದಂಧೆ, ಅಕ್ರಮ ವಲಸಿಗರು, ಎಫ್‌ಎಸ್‌ಎಲ್ ಕುರಿತ ವಿಷಯಗಳು ಸೇರಿದಂತೆ ಆಧುನಿಕ ಪೊಲೀಸ್ ವ್ಯವಸ್ಥೆಗೆ ಬೇಕಾದ ವಿಚಾರಗಳ ಕುರಿತು ಚರ್ಚಿಸಲಾಗಿದೆ.