ಸರಗೂರು: ಕಂದೇಗಾಲ ಗ್ರಾಮದಲ್ಲಿ ಚಿರತೆ ದಾಳಿಗೆ ಎತ್ತು ಬಲಿ
ಚಿರತೆ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕುಳ್ಳಯ್ಯ ಎಂಬುವರು ತಮ್ಮ ಜಮೀನಿನಲ್ಲಿ ಮೇಯಿಸುತ್ತಿದ್ದ ವೇಳೆ ಏಕಾಏಕಿ ಎತ್ತುವಿನ ಮೇಲೆ ದಾಳಿ ನಡೆಸಿದೆ. ಕುತ್ತಿಗೆ ಮತ್ತು ಹಿಂಭಾಗದಲ್ಲಿ ಕಚ್ಚಿ ಗಾಯಗೊಳಿಸಿದೆ. ಸ್ಥಳೀಯ ರೈತರು ಕೂಗಿಕೊಂಡಾಗ ಚಿರತೆ ಪರಾರಿಯಾಗಿದೆ. ಸುಮಾರು 80 ಸಾವಿರಕ್ಕೂ ಹೆಚ್ಚು ಬೆಳೆಬಾಳುವ ಎತ್ತು ಇದಾಗಿದ್ದು, ರೈತನಿಗೆ ತುಂಬಲಾರದ ನಷ್ಟ ಉಂಟಾಗಿದೆ. ಈ ಭಾಗದಲ್ಲಿ ಸಾಕು ಪ್ರಾಣಿಗಳ ಮೇಲೆ ನಿರಂತರವಾಗಿ ಚಿರತೆ ದಾಳಿ ನಡೆಸುತ್ತಿದೆ. ಇದರಿಂದ ರೈತರು ಮತ್ತು ಗ್ರಾಮಸ್ಥರು ಓಡಾಡಲು ಭಯಭೀತಿಯಲ್ಲಿದ್ದಾರೆ. ನಷ್ಟ ಅನುಭವಿಸಿದ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.