ಹಳಿಯಾಳ : ತಾಲೂಕಿನ ಕಾವಲವಾಡ - ಬೆಳವಟಗಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರವಾಹನದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಭಾನುವಾರ ಬೆಳಿಗ್ಗೆ ನಡೆದಿದ್ದು, ಈ ಬಗ್ಗೆ ಇಂದು ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ತಾಲೂಕಿನ ದುಸಗಿಯ ನಿವಾಸಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಳಿಯಾಳ ಉಪಕಚೇರಿಯಲ್ಲಿ ಕಚೇರಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 28 ವರ್ಷ ವಯಸ್ಸಿನ ವಿಶಾಲ್ ಸುರೋಜಿ ಎಂಬವರೇ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ತಮ್ಮ ದುಸಗಿಯ ಮನೆಯಿಂದ ಕಾವಲವಾಡಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.