ಜಿಂಕೆ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಪಟ್ಟಣದಲ್ಲಿ ನಡೆದಿದೆ. ಎಚ್.ಡಿ. ಕೋಟೆ ಪಟ್ಟಣದ ವಿದ್ಯಾ ನಗರ ನಿವಾಸಿ ಎಂ. ಕುಮಾರ (36) ಬಂಧಿತ ಆರೋಪಿ. ಈತ ಎಚ್.ಡಿ. ಕೋಟೆ ಉಪ ನೋಂದಣಾಧಿಕಾರಿಗಳ ಕಚೇರಿ ಎದುರು ಟೀ ಅಂಗಡಿಯಲ್ಲಿ ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ಹ್ಯಾಂಡ್ ಪೋಸ್ಟ್ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಆರೋಪಿಯನ್ನು ಮಾಲು ಸಮೇತ ಬಂಧಿಸಿ, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.