ಜಗಳೂರು: ಪಟ್ಟಣದ ವಿವಿಧೆಡೆ ಇಂಗ್ಲಿಷ್ ನಾಮಫಲಕಗಳ ತೆರವು ಕಾರ್ಯಾಚರಣೆ
ಪಟ್ಟಣದ ವಿವಿಧೆಡೆ ಪಟ್ಟಣ ಪಂಚಾಯಿತಿಯಿಂದ ಅಂಗಡಿ ಮುಂಗಟ್ಟುಗಳ ಮೇಲೆ ಅಳವಡಿಸಿದ ಇಂಗ್ಲಿಷ್ ನಾಮಫಲಕಗಳ ತೆರವು ಕಾರ್ಯಾಚರಣೆ ನಡೆಸಲಾಯಿತು. ಪಟ್ಟಣದ ಅಂಬೇಡ್ಕರ್ ವೃತ್ತ , ಮಹಾತ್ಮ ಗಾಂಧಿ ಬಸ್ ನಿಲ್ದಾಣ,ಮಹಾತ್ಮಾ ಗಾಂಧಿ ವೃತ್ತ ಸೇರಿದಂತೆ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಅಳವಡಿಸಿದ ಇಂಗ್ಲಿಷ್ ನಾಮಫಲಕ ತೆರವುಗೊಳಿಸಲಾಯಿತು.ಜಿಲ್ಲಾಧಿಕಾರಿಗಳ ಆದೇಶದಂತೆ ಶೇ.60ರಷ್ಟು ನಾಮಫಲಕಗಳಲ್ಲಿ ಕನ್ನಡ ಬಳಕೆಯಾಗಿರಬೇಕು. ಇಲ್ಲವಾದರೆ ತೆರವುಗೊಳಿಸುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರೆ, ಇನ್ನೂ ಕೆಲವೆಡೆ ಸಿಬ್ಬಂದಿ ತೆರವುಗೊಳಿಸಿದರು. ಈ ವೇಳೆ ಆರೋಗ್ಯ ನಿರೀಕ್ಷಕ ಪ್ರಶಾಂತ್, ರಾಜೇಶ್ ಸೇರಿ ಅನೇಕರು ಇದ್ದರು.