ಪಟ್ಟಣಕ್ಕೆ ನೀರನ್ನು ಒದಗಿಸುವ ಚಿತ್ರಾವತಿ ಡ್ಯಾಂ ನಿಂದ ನೀರಿನ ಶುದ್ಧೀಕರಣ ಘಟಕಕ್ಕೆ ಬಿಡಲಾಗುತ್ತದೆ. ಅಲ್ಲಿಂದ ಶುದ್ದೀಕರಣ ಮಾಡದೆಯೇ ಯಥಾವತ್ತಾಗಿ ಪಟ್ಟಣದ ನಿವಾಸಿಗಳಿಗೆ ಪಂಪ್ ಮಾಡಲಾಗುತ್ತಿದೆ ಎಂದು ಸಿಪಿಐಎಂ ಮುಖಂಡ ಚನ್ನರಾಯಪ್ಪ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಸಂತೇಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕಕ್ಕೆ ಭಾನುವಾರ ಭೇಟಿ ನೀಡಿದ ಸಿಪಿಐಎಂ ನಗರದ ಘಟಕ ನಿಯೋಗವು, ಘಟಕದ ಕಾರ್ಯದ ಬಗ್ಗೆ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಇಲ್ಲಿನ ನೀರನ್ನು ಶುದ್ಧೀಕರಣ ಮಾಡಬೇಕಾದ ಯಂತ್ರಗಳು ಸ್ಥಗಿತಗೊಂಡು ಹಲವಾರು ತಿಂಗಳುಗಳೇ ಆಗಿವೆ. ಜೊತೆಗೆ ನೀರಿನ ಶುದ್ಧೀಕರಣ ಘಟಕದಲ್ಲಿ ಆಲಂ ಬಳಸುತ್ತಿಲ್ಲ, ಕಲ್ಮಶಗಳನ್ನು ತೆಗೆಯುವ ಯಾವೊಂದು ವಿಧಾನವನ್ನೂ ಅನುಸರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.