ಅಕ್ರಮ ಮರಳು ಸಾಗಾಣಿಕೆ ಮಾಡುವ ಆರೋಪದಲ್ಲಿ 14 ಟಿಪ್ಪರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿ ಮರಳು ಜೆಸಿಬಿ ಮೂಲಕ ತುಂಬಿಸಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪದ ಕುರಿತು ಖಚಿತ ಮಾಹಿತಿ ಪಡೆದ ಮಾನವಿ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದ ಮೇರೆಗೆ ಮಾನವಿ ಠಾಣೆಯ ಪಿ.ಐ ಸೋಮಶೇಖರ ಕೆಂಚರೆಡ್ಡಿ ಅವರ ಸಿಬ್ಬಂದಿ ದಾಳಿಯನ್ನು ನಡೆಸಿ 14 ಟಿಪ್ಪರ್ ಹಾಗೂ ಒಂದು ಜೆಸಿಬಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಟಿಪ್ಪರ್ ಮತ್ತು ಜೆಸಿಬಿ ಗಳನ್ನು ಬಿಟ್ಟು ಚಾಲಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಾನ್ವಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.