ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಭೈರತಿ ಬಸವರಾಜ್‌ಗೆ ಬಂಧನ ಭೀತಿ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಆದೇಶವನ್ನು ತೆರವು ಮಾಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ಸಂದರ್ಭದಲ್ಲಿ ಭೈರತಿ ಬಸವರಾಜ್ ಸುಳ್ಳು ಮಾಹಿತಿ ನೀಡಿರುವುದಾಗಿ ಪ್ರಾಸಿಕ್ಯೂಷನ್ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್. ಜಗದೀಶ್ ವಾದ ಮಂಡಿಸಿದ್ದಾರೆ. ಬಂಧನದ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್, ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಪ್ರಸಿದ್ಧ ಅನ್ನಪೂರ್ಣೇಶ್ವರಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಅವರು ಮಾರ್ಗ ಮಧ್ಯದ ಕೊಟ್ಟಿಗೆಹಾರದ ಸೀತಾರಾಮ ದೇಗುಲಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.