ಸತತ ಮಳೆಯಾಗುತ್ತಿರುವುದು ಹತ್ತಿ ಹೊಲಗಳಿಗೆ ಮುಳುವಾಗಿ ಪರಿಣಮಿಸಿದೆ. ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಹತ್ತಿ ಹೊಲಗಳಲ್ಲಿ ಕಸ ಹೆಚ್ಚಾಗಿ ಬೆಳೆಯುತ್ತಿದೆ. ಹೊಲಗಳಲ್ಲಿ ಕಳೆ ತೆಗೆಯಲು ಸಹ ಮಳೆರಾಯ ಬಿಡುವು ನೀಡದ ಕಾರಣ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶಗಳಲ್ಲಿನ ಹತ್ತಿ ಜಮೀನು ಬೀಳು ಬೀಳುತ್ತಿವೆ. ರೈತರಿಗೆ ಕಳೆನಿರ್ವಹಣೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆ ತೆಗೆಯಲು ಕೂಲಿಕಾರರನ್ನು ನೇಮಿಸಿದರೂ ಹೊಲಗಳು ಸ್ವಚ್ಛಗೊಳ್ಳುತ್ತಿಲ್ಲ ಎಂದು ಕಲ್ಯಾಣ ಕರ್ನಾಟಕ ರೈತ ಸಂಘದ ಅಧ್ಯಕ್ಷ ಜಿಂದಪ್ಪ ವಡ್ಲೂರು ಶುಕ್ರವಾರ ಪ್ರಕಟಣೆ ನೀಡಿ ತಿಳಿಸಿದ್ದಾರೆ.