ಚಿತ್ರದುರ್ಗ:-ಅಕ್ಟೋಬರ್ 02 ರ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಹೀ ಸೇವಾ ಅಭಿಯಾನದಡಿ ಶ್ರಮದಾನ ಮಾಡುವ ಮೂಲಕ ಸ್ವಚ್ಚತೆಯ ಸಂದೇಶ ಸಾರಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದಲ್ಲಿ ಗುರುವಾರ “ಸ್ವಚ್ಚತಾ ಹೀ ಸೇವಾ-ಸ್ವಚ್ಛತೆಯೇ ಸೇವೆ” ಪಾಕ್ಷಿಕ ಅಭಿಯಾನದಡಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಮದಕರಿಪುರ ಗ್ರಾಮ ಪಂಚಾಯತ್ ಹಾಗೂ ಚಿತ್ರದುರ್ಗ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಚ್ಛತೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.