ಬಂಗಾರದ ಗಿಂಡಿಲೇ ನಾಡಿಗೆ ಸಿರಿ ಆಯಿತಲೇ ಪರಾಕ್' ಎಂದು ದೇವರಗುಡ್ಡ ಮಾಲತೇಶ್ವರ ಕಾರ್ಣಿಕದಲ್ಲಿ ಗೊರವಪ್ಪ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ನಾಡಿನಲ್ಲಿ ಈ ವರ್ಷ ಹಿಂಗಾರು ಮಳೆ ಬೆಳೆ ಉತ್ತಮವಾಗಿರಲಿದ್ದು, ನಾಡಿಗೆ ಒಳಿತಾಗಲಿದೆ ಎಂದಾಗಿದೆ. ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಬುಧವಾರ ಸಂಜೆ ಕಾರ್ಣಿಕೋತ್ಸವ ನಡೆಯಿತು. ಪ್ರತಿ ವರ್ಷ ಆಯುಧ ಪೂಜೆ ದಿನದಂದು ನಡೆದ ಈ ಉತ್ಸವದಲ್ಲಿ, ಗೊರವಪ್ಪ ನಾಗಪ್ಪ ಅವರು ಸುಮಾರು 20 ಅಡಿ ಎತ್ತರದ ಬಿಲ್ಲನ್ನು ಏರಿದರು. ಅಲ್ಲಿಂದ "ಬಂಗಾರದ ಗಿಂಡಿಲೇ ನಾಡಿಗೆ ಸಿರಿ ಆಯಿತಲೇ ಪರಾಕ್' ಎಂದು ಭವಿಷ್ಯ ನುಡಿದರು. ನಂತರ ಬಿಲ್ಲು ಏರಿದ್ದ ಗೊರವಪ್ಪ ಕೆಳಗೆ ಧುಮುಕಿದರು. ಭಕ್ತರು ಅವರನ್ನು ನೆಲಕ್ಕೆ ಬೀಳದಂತೆ ಹಿಡಿದರು.