ಒಂದೇ ಮನೆಯಲ್ಲಿ ಮೂರು ಅಧಿಕಾರ ಇಟ್ಟುಕೊಂಡಿರುವ ಶಾಮನೂರು ಕುಟುಂಬದವರು ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿಯ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಒತ್ತಾಯಿಸಿದರು. ಸೋಮವಾರ ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಎಸ್.ಮಲ್ಲಿಕಾರ್ಜುನ್ ಮಂತ್ರಿಯಾಗಿ ಹಾಗೂ ಶಾಮನೂರು ಶಿವಶಂಕರಪ್ಪ ಶಾಸಕರಾಗಿ ಎರಡೂವರೆ ವರ್ಷಗಳು ಕಳೆದಿವೆ. ಡಾ.ಪ್ರಭಾ ಮ ಲ್ಲಿಕಾರ್ಜುನ್ ಸಂಸದರಾಗಿ ಒಂದೂವರೆ ವರ್ಷ ಕಳೆದಿದೆ. ದಾವಣಗೆರೆಯ ಜನ ಒಂದೇ ಮನೆಗೆ ಇಷ್ಟೆಲ್ಲಾ ಅಧಿಕಾರಕೊಟ್ಟಿದ್ದಾರೆ. ಹೀಗಿರುವಾಗ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ತರಲುಅಡ್ಡಿಯಾಗಿರುವುದು ಯಾರು? ಎಂಬುದರ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದರು.