ಮಂಗಳೂರು ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ, ತಾಲೂಕಿನ ಕೊನೆಯ ಗ್ರಾಮವಾದ ಕುಪ್ಪೆಪದವು ಗ್ರಾಮದ ಜನತೆ ಸರಿಯಾದ ಬಸ್ ಪ್ರಯಾಣ ಸೇವೆಯಿಂದ ವಂಚಿತರಾಗಿದ್ದಾರೆ. ಖಾಸಗಿ ಬಸ್ ಗಳು ಮಂಗಳೂರು ನಗರದಿಂದ ಕುಪ್ಪೆಪದವು ಗ್ರಾಮಕ್ಕೆ ಸಂಚರಿಸುತ್ತಿದ್ದರೂ, ಅದರ ಪ್ರಮಾಣ ಸಾಲದು. ವಿದ್ಯಾರ್ಥಿಗಳು, ಕೂಲಿಕಾರರು, ವಿವಿಧ ಉದ್ಯೋಗಳಲ್ಲಿ ತೊಡಗಿಸಿಕೊಂಡವರು ಸೇರಿ ಕೈಕಂಬ, ಮಂಗಳೂರು, ಮೂಡಬಿದ್ರೆಯನ್ನು ದೊಡ್ಡ ಪ್ರಮಾಣದಲ್ಲಿ ಕುಪ್ಪೆಪದವು, ಇರುವೈಲು ಹಾಗು ಸುತ್ತಮುತ್ತಲಿನ ಜನತೆ ಅವಲಂಬಿಸಿದ್ದಾರೆ. ಬೆಳಗ್ಗೆ ಹಾಗು ಸಂಜೆಯ ಹೊತ್ತು ಈಗಿರುವ ಬಸ್ ಗಳಲ್ಲಿ ವಿಪರೀತ ನೂಕುನುಗ್ಗಲು ಇರುತ್ತದೆ. ಮಹಿಳೆಯರು, ವಿದ್ಯಾರ್ಥಿಗಳಿಗೆ ಪ್ರಯಾಣಿಸುವುದೇ ತೀರಾ ತ್ರಾಸದಾಯಕ ಆಗಿರುತ್ತದೆ.