ಹಬ್ಬಗಳು ಸಮಾನತೆ ಹಾಗೂ ಸಹೋದರತೆ ಸಂಕೇತವಾಗಿದ್ದು, ಜಿಲ್ಲೆಯಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸಲಹೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಜರುಗಿದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತ ದೇಶದ ಸಂಸ್ಕೃತಿ, ಪರಂಪರೆ, ವೈವಿಧ್ಯತೆಯಿಂದ ಕೂಡಿದೆ. ಧರ್ಮಗಳು ನ್ಯಾಯದ ಬದುಕು ನಡೆಸುವುದನ್ನು ಹೇಳಿಕೊಟ್ಟಿವೆ. ಪೈಗಂಬರ್ ಅವರು ಸಹಾನುಭೂತಿ, ಸಮಾನತೆ, ಭೋಧಿಸಿದ್ದಾರೆ.