ಚಿರತೆ ದಾಳಿಗೆ ಮೂರು ಮೇಕೆಗಳು ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದ ಹೊರವಲಯದ ಮಂಗಳಮ್ಮನ ಗುಡ್ಡದ ಸಮೀಪ ಬುಧವಾರ ನಡೆದಿದೆ. ಮಂಚಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವವರಿಗೆ ಸೇರಿದ ಮೇಕೆಗಳು ಇದಾಗಿದ್ದು, ಮೇಯಿಸಿ ವಾಪಾಸ್ ಬರುವ ವೇಳೆ ಮೇಕೆ ಹಿಂಡಿನ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿ ಮೂರನ್ನು ಕೊಂದು ಹಾಕಿದೆ. ಇದರಲ್ಲಿ ಒಂದು ಮೇಕೆಯನ್ನು ಎಳೆದೋಯ್ದಿದೆ. ಮೇಕೆ ಸಾಕಾಣಿಕೆಯನ್ನೆ ನಂಬಿ ಜೀವನ ನಡೆಸುತ್ತಿದ್ದ ಬಡ ಮಹಿಳೆ ಭಾಗ್ಯಮ್ಮ ಮೇಕೆಗಳನ್ನು ಕಳೆದುಕೊಂಡು ಕಣ್ಣೀರು ಹಾಕಿದ್ದಾರೆ.