ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿಗೆ ಮದುವೆಯಾದ ಹಿನ್ನೆಲೆಯಲ್ಲಿ ವರನ ವಿರುದ್ಧ ಹಾಗೂ ಅವರ ಮತ್ತು ಬಾಲಕಿಯ ಪೋಷಕರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹುಣಸಗಿ ತಾಲೂಕಿನ ಬೈಲಕುಂಟಿ ಗ್ರಾಮದ ಜಟ್ಟೆಪ್ಪ ಎನ್ನುವ ಯುವಕ 15 ವರ್ಷ 11 ತಿಂಗಳ ಬಾಲಕಿಗೆ ಮದುವೆಯಾಗಿದ್ದಾನೆ ಎನ್ನುವ ಆರೋಪದ ಮೇಲೆ ಯಾದಗಿರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ನಾರಾಯಣ ಕರ್ ಅವರು ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮದುವೆಯಾಗಿರುವ ಜೆಟ್ಟೆಪ್ಪ ಹಾಗೂ ಮದುವೆ ಮಾಡಿರುವ ಆತನ ಪೋಷಕರು ಮತ್ತು ಬಾಲಕಿಯ ಪೋಷಕರ ವಿರುದ್ಧ ಕ್ರಮಕ್ಕೆ ದೂರು ನೀಡಿದ್ದಾರೆ.ಜಟ್ಟೆಪ್ಪನ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.