ಮದ್ದೂರು ಪಟ್ಟಣದ ಉದ್ವಿಗ್ನ ಸ್ಥಿತಿಗೆ ಕಾರಣರಾದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಮೆರಣವಿಗೆ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ ನಡೆಸಿದವರನ್ನು ಜಿಲ್ಲಾಡಳಿತ ಕಂಡು ಹಿಡಿಯಬೇಕು. ಉದ್ವಿಗ್ನ ಸ್ಥಿತಿಯನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಜಿಲ್ಲೆಯ ಜನತೆ ಕೋಮುವಾದಕ್ಕೆ ಬಲಿಯಾಗದೇ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಹೇಳಿದರು. ಕಲ್ಲು ತೂರಾಟದಿಂದ ಮದ್ದೂರು ಪಟ್ಟಣದಲ್ಲಿ ಉಂಟಾದ ಉದ್ವಿಗ್ನತೆ ಕೋಮುಗಳ ನಡುವಿನ ಸೌಹಾರ್ದತೆಗೆ ಧಕ್ಕೆ ತಂದೊಡ್ಡಿದೆ. ಇದನ್ನು ಕೆಲ ಶಕ್ತಿಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದರು.