ನಿಮ್ಮ ಸಂಪ್ರದಾಯಗಳತೆ ನಿಮ್ಮ ಹಬ್ಬಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದತೆ, ಶಾಂತಿಯುತವಾಗಿ ಆಚರಣೆ ಮಾಡಬೇಕು. ನೀವೇನಾದರೂ ಅತಿರೇಕವಾಗಿ, ಹದ್ದು ಮೀರಿ ವರ್ತನೆ ಮಾಡಿ, ಕಾನೂನನ್ನು ಕೈಗೆ ತೆಗೆದುಕೊಂಡು, ಕಾನೂನು ಬಾಹಿರ ಕೆಲಸಗಳನ್ನು ಮಾಡಿದರೆ ನಿರ್ದಾಕ್ಷಿಣ್ಯವಾಗಿ ನಿಮ್ಮ ಮೇಲೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮುಸ್ಲಿಂ ಸಮುದಾಯದ ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ ಮಿಲಾದ್ ಹಬ್ಬದ ಆಚರಣೆ ವೇಳೆಯಲ್ಲಿ ಕೆಲವು ಯುವಕರು ಅನ್ಯ ದೇಶವೊಂದರ ಬಾವುಟವನ್ನು ಪ್ರದರ್ಶಿಸುವ ಮೂಲಕ ಕಾನೂನು ಕಟ್ಟಳೆಗಳನ್ನು ಮೀರಿ ಅತಿರೇಕದ ವರ್ತನೆಯನ್ನು ತೋರಿರುವುದು ಪತ್ರಿಕೆಗಳ ಮೂಲಕ ತಿಳಿದು ಬಂದಿದೆ ಎಂದು ಹೇಳಿದರು.