ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಯಾಗಿದ್ದ ಕೌನ್ಸೆಲಿಂಗ್ ವರ್ಗಾವಣೆಗಳನ್ನು ಜಾರಿಗೆ ತರಲಾಗಿದ್ದು, ಪಿಡಿಒಗಳು ಗ್ರಾಮಗಳ ಅಭಿವೃದ್ಧಿಯತ್ತ ಆದ್ಯತೆ ನೀಡಿ ಕಾರ್ಯನಿರ್ವಹಿಸುವಲ್ಲಿ ಕಂಕಣಬದ್ಧರಾಗಬೇಕಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ನಡೆಸುವ ಪ್ರಕ್ರಿಯೆಗೆ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಟೌನ್ ಹಾಲ್ ಬಳಿ ಚಾಲನೆ ನೀಡಿದ ಸಚಿವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪುಟಗಳಲ್ಲಿ ಚರಿತ್ರಾರ್ಹ ದಿನ ಇಂದಾಗಿದೆ ಎಂದರು.