ಸಾರ್ವಜನಿಕವಾಗಿ ಮೂವರು ಪೊಲೀಸ್ ಅಧಿಕಾರಿಗಳು ರೌಡಿಗಳಂತೆ ವರ್ತನೆ ಮಾಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಆದ ಜಿಪಂ ಮಾಜಿ ಅಧ್ಯಕ್ಷ ವೈ. ಹೆಚ್. ಹುಚ್ಚಯ್ಯ ಗಂಭೀರ ಆರೋಪ ಮಾಡಿದರು. ಪೊಲೀಸ್ ಅಧಿಕಾರಿಗಳಾದ ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಪುಟ್ಟೇಗೌಡ, ಸಬ್ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ಹಾಗೂ ಜಯನಗರ ಪೊಲೀಸ್ ಠಾಣೆ ಎಸ್ ಐ ಪ್ರಸನ್ನ ಕುಮಾರ್ ಅವರುಗಳು ಬಿಜೆಪಿ ಮುಖಂಡರಿಗೆ ಕಾಪಾಳ ಮೋಕ್ಷ, ಹಲ್ಲೆ ಮಾಡುವ ಮೂಲಕ ರೌಡಿಗಳಂತೆ ವರ್ತನೆ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತುಮಕೂರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಬುಧವಾರ ಮಧ್ಯಾಹ್ನ 12 ರ ಸಮಯದಲ್ಲಿ ಮಾತನಾಡಿದರು.