ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಳೆದ ಒಂದು ವರ್ಷದಿಂದ ಉಪಟಳ ನೀಡುತ್ತಿದ್ದ ಪುಂಡಾನೆ ಕೊನೆಗೂ ಸೆರೆಯಾಗಿದೆ. ವಗಡೆ, ಕಾನೂರು, ಬಾಳೆಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ, ಹೊರಬೈಲು, ನೇರ್ಲೆ, ಗೋಣಿಕೊಪ್ಪ, ಚಿಟ್ಟಿಕೊಡಿಗೆ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಈ ಸಲಗವು ನಿರಂತರವಾಗಿ ಬೆಳೆ ಹಾನಿ ಮಾಡುತ್ತಿದ್ದು, ರೈತರ ತೋಟಗಳಿಗೆ ಅಪಾರ ನಷ್ಟ ಉಂಟಾಗಿತ್ತು. ಇದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಶೃಂಗೇರಿ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆನೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಆದೇಶಿಸಿದ್ದರು.