ಕನಿಷ್ಠವೇತನ, ಪ್ರೋತ್ಸಾಹಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ಎಐಯುಟಿಯುಸಿ) ಕರೆ ನೀಡಿದ್ದ ರಾಜ್ಯವ್ಯಾಪಿ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನಾ ಧರಣಿ ಬುಧವಾರ ಎರಡನೇ ದಿನವನ್ನು ಪೂರೈಸಿತು. ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಶಾಮಿಯಾನ ಹಾಕಿಕೊಂಡು ನಡೆಸುತ್ತಿರುವ ಪ್ರತಿಭಟನೆಗೆ ಮಳೆರಾಯನ ಅವಕೃಪೆಯೂ ತೋರಿದ್ದು, ಆಶಾ ಕಾರ್ಯಕರ್ತೆಯರು ಬಿಟಿ ಜಿಟಿ ಮಳೆಯಲ್ಲಿಯೇ ಪ್ರತಿಭಟನೆಯನ್ನು ಮುಂದುವರೆಸಿದರು. ಡಾಂಬರ್ ರಸ್ತೆಯ ಮೇಲಿನ ಮಳೆ ನೀರು ಪ್ರತಿಭಟನಾ ಸ್ಥಳಕ್ಕೆ ನುಗ್ಗದಂತೆ ಮುನ್ನೆಚ್ಚರಿಕೆ ವಹಿಸಿ ಗೊರ್ಚು ಮಣ್ಣನ್ನು ಅಡ್ಡಲಾಗಿ ಹಾಕಿ ನೀರು ನುಗ್ಗುವುದಕ್ಕೆ ತಡೆಯೊಡ್ಡಿ ಪ್ರತಿಭಟನೆ ಮುಂದುವರೆಸಿದರು.