ದಾವಣಗೆರೆ ತಾಲ್ಲೂಕಿನ ಜರಿಕಟ್ಟೆ ಗ್ರಾಮದ ಛತ್ರಪತಿ ಶಿವಾಜಿ ಕಲ್ಯಾಣ ಮಂಟಪದ ಎದುರು ಚಲಿಸುತ್ತಿದ್ದ ದ್ವಿಚಕ್ರ ವಾಹನದಿಂದ ಬಿದ್ದು ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ದೇವರಬೆಳಕೆರೆಯ ಪುಷ್ಪಾವತಿ (40) ಮೃತ ಮಹಿಳೆ. ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಪುತ್ರ ವಿನಯ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಮತ್ತು ಮಗ ಮಂಗಳವಾರ ಸಂಜೆ 5 ಗಂಟೆಗೆ ದ್ವಿಚಕ್ರ ವಾಹನದಲ್ಲಿ ದೇವಬೆಳಕೆರೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದರು. ಈ ವೇಳೆ ನಾಯಿಯೊಂದು ಏಕಾಏಕಿ ಅಡ್ಡಬಂದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನದಿಂದ ಪುಷ್ಪಾವತಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.