ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹಾಗೂ ಬೆಲಚಲವಾಡಿ ಗ್ರಾಮದ ಬೀದಿಗಳಲ್ಲಿ ಸೋಮವಾರ ತಡ ರಾತ್ರಿ ಭಾರೀ ಗಾತ್ರದ ಕರಡಿಯೊಂದು ಸಂಚರಿಸಿ ತಲ್ಲಣ ಮೂಡಿಸಿದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಓಂಕಾರ ಅರಣ್ಯ ವಲಯದಿಂದ ಬಂದಿದೆ ಎನ್ನಲಾದ ಕರಡಿಯು ಸೋಮವಾರ ರಾತ್ರಿ ಬೆಲಚಲವಾಡಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಬೇಗೂರು ಗ್ರಾಮದ ಬೀದಿಗಳಲ್ಲೂ ಕೂಡ ಅಡ್ಡಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕರಡಿಯಿಂದ ಅನಾಹುತ ಸಂಭವಿಸುವ ಮೊದಲು ಕೂಡಲೆ ಅರಣ್ಯ ಇಲಾಖೆಯು ಕರಡಿ ಸೆರೆ ಹಿಡಿದು ಕಾಡಿಗೆ ಬಿಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.