ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮಂಗಲ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದವರ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮಂಗಲ ಗ್ರಾಮದ ಬಂಗಾರಚಾರಿ(48), ರತ್ನಮ್ಮ(55) ಎಂಬವರು ಗಾಯಗೊಂಡವರು. ಗುಂಡ್ಲುಪೇಟೆ ಪಟ್ಟಣದಿಂದ ಮಂಗಲ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮಂಗಲ ರಸ್ತೆ ಬದಿಯಲ್ಲಿ ನಿಂತಿದ್ದ ಆನೆ ಏಕಾಏಕಿ ದಾಳಿ ಮಾಡಿದೆ. ಘಟನೆಯಲ್ಲಿ ಬಂಗಾರಚಾರಿ ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು, ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದೆ. ಬಳಿಕ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದವರು ದಾಳಿಗೆ ಒಳಗಾದವರನ್ನು ಆನೆಯಿಂದ ರಕ್ಷಣೆ ಮಾಡಿದ್ದಾರೆ.