ಗಣೇಶೋತ್ಸವ ವೇಳೆ ಡಿ.ಜೆ (ಡಿಸ್ಕ್ ಜಾಕಿ) ಬಳಕೆ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಹಾಗೂ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ಬೆಂಬಲಿಗರ ವಿರುದ್ಧ ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 'ಯುವಕರು ಡಿ.ಜೆ. ಬಳಕೆ ನಿಷೇದಾಜ್ಞೆ ಉಲ್ಲಂಘಿಸಿ' ಎಂದು ಕರೆ ನೀಡಿದ್ದಲ್ಲದೆ, 'ತಾಕತ್ತಿದ್ದರೆ ಪೊಲೀಸರು, ಜಿಲ್ಲಾಡಳಿತ ಅದನ್ನು ತಡೆಯಲಿ' ಎಂದು ಸವಾಲು ಹಾಕಿದ್ದ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಪೊಲೀಸರು ಶುಕ್ರವಾರ ಸಂಜೆ 7 ಗಂಟೆಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.