ತಾಲೂಕಿನ ಕಲ್ಮಲಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಕ್ತ ಪರೀಕ್ಷೆ ಮಾಡುವ ಯಂತ್ರವಿಲ್ಲದೆ ಶನಿವಾರ ರೋಗಿಗಳು ಪರದಾಡುವಂತಾಯಿತು. ಕಲ್ಮಲಾ ಹೋಬಳಿ ಕೇಂದ್ರ ವ್ಯಾಪ್ತಿಯ ಕಲ್ಮಲಾ, ಸೀತಾನಗರ ಕ್ಯಾಂಪ್, ಮುರಾನಪುರ, ಸುಲ್ತಾನಪುರ, ವಿಜಯನಗರ ಕ್ಯಾಂಪ್, ಹುಣಸಿಹಾಳಹುಡಾ ಸೇರಿದಂತೆ ವಿವಿಧ ಕ್ಯಾಂಪ್ ಗಳಿಂದಲೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ಬರುತ್ತಾರೆ. ಹೆರಿಗೆ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ. ಆದರೆ ರಕ್ತ ಪರೀಕ್ಷೆ ಮಾಡುವ ಯಂತ್ರ ಕೆಟ್ಟುಹೋಗಿದ್ದರೂ ದುರಸ್ಥಿ ಕಾರ್ಯಕೈಗೊಂಡಿಲ್ಲ. ಜೊತೆಗೆ ರಕ್ತ ಪರೀಕ್ಷೆ ಮಾಡಲು ಲ್ಯಾಬ್ ಟೆಕ್ನಿಷಿಯನ್ ಹೆಚ್ಚುವರಿಯಾಗಿ ನಿಯೋಜನೆಗೊಂಡಿಲ್ಲ. ರಜಾ ದಿನಗಳಲ್ಲಿ ಲ್ಯಾಬ್ ಟೆಕ್ನಿಷಿಯನ್ ಇಲ್ಲದೆ ರಕ್ತ ಪರೀಕ್ಷೆಗೆ ಬರುವ ರೋಗಿಗಳನ್ನ ವಾಪಸ್ಸು ಕಳಿಸಲಾಗುತ್ತಿದೆ.