ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಗೌರಿ ಹಬ್ಬದ ಆಚರಣೆ ಭಕ್ತಿಭಾವ, ಶ್ರದ್ಧೆ ಹಾಗೂ ವೈಭವದಿಂದ ಕೂಡಿತ್ತು. ಗೌರಿ ಹಬ್ಬದ ಅಂಗವಾಗಿ ಪ್ರತಿಷ್ಠಾಪಿತವಾಗಿದ್ದ ಗೌರಮ್ಮನನ್ನು ಕಳಸದಲ್ಲಿನ ಗಂಗೆಗೆ ಶನಿವಾರ ರಾತ್ರಿ11ರಲ್ಲಿ ವಿಶೇಷ ಪೂಜೆ ನೆರವೇರಿಸಿ, ಬಳಿಕ ಅಂತರಗಂಗೆಯ ಗೌರಿ ಮಡುವಿನಲ್ಲಿ ವಿಸರ್ಜನೆ ಮಾಡಲಾಯಿತು. ಸಾಲೂರು ಬೃಹನ್ಮಠದ ಕಿರಿಯ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ಸಮ್ಮುಖದಲ್ಲಿ ಸೇವೆಯ ಮೂಲಕ, ಬೇಡಗಂಪಣ ಗುರುಪರಂಪರೆಯಂತೆ ಐದು ದಿನಗಳ ಕಾಲ ಗೌರಮ್ಮನ ಕಳಸ ಹಾಗೂ ಮೂರ್ತಿಗೆ ವಿವಿಧ ಧಾರ್ಮಿಕ ಆಚರಣೆಗಳುನಡೆಸಲಾಯಿತು.ಉಪವಾಸವಿದ್ದ ಅರ್ಚಕರು ಮಾದಪ್ಪ ಹಾಗೂ ಸ್ವರ್ಣಗೌರಿಗೆ ಗೋವಿನ ಹಾಲಿನಿಂದ ಏಕಕಾಲದಲ್ಲಿ ಅಭಿಷೇಕ ನೆರವೇರಿಸಿದರು.