ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸದಾಶಿವನಗರ ನಿವಾಸದ ಸಮೀಪದಲ್ಲಿ ಪತ್ತೆಯಾದ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದ ಕಾರು ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ಅವರ ಹೆಸರಿನಲ್ಲಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.ಕಾರನ್ನ ವಶಕ್ಕೆ ಪಡೆದಿದ್ದ ಸದಾಶಿವನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಅದು ಮಾಜಿ ಶಾಸಕರ ಹೆಸರಿನಲ್ಲಿ ನೊಂದಣಿಯಾಗಿರುವುದು ತಿಳಿದು ಬಂದಿದೆ.ಪ್ರಕರಣದ ಕುರಿತು ಸೆಪ್ಟೆಂಬರ್ 12ರಂದು ಮಧ್ಯಾಹ್ನ 12:30ಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ.ಹಕೇ, "ಮಂಜುನಾಥ್ ಅವರು ಕೃಷ್ಣಮೂರ್ತಿ ಎನ್ನುವವರಿಗೆ ಕಾರನ್ನ ನೀಡಿದ್ದು, ಈ ನಡುವೆ ಯಾವ ಹಂತದಲ್ಲಿ ಕಾರಿನ ನಂಬರ್ ಪ್ಲೇಟ್ ಬದಲಾಗಿದೆ ಎಂದು ತನಿಖೆ ನಡೆಸಲಾಗುತ್ತಿದೆ" ಎಂದರು.