ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಮುತ್ಯಾಲಮ್ಮ ದೇವಸ್ಥಾನ ಸೇರಿ ಇತರೆ ಸ್ಥಳಗಳಲ್ಲಿ ಮಹಿಳೆಯ ದೇಹವನ್ನ ತುಂಡರಿಸಿದ ಭಾಗಗಳನ್ನ ಬಿಸಾಡಿ ಹೋಗಿದ್ದ ಪ್ರಕರಣವನ್ನ ಭೇದಿಸಲಾಗಿದೆ. ಈ ಭೀಕರ ಹತ್ಯೆಯ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ತಮ್ಮ ಸಿಬ್ಬಂದಿ ಯಶಸ್ವಿಯಾಗಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ವಿ. ಅಶೋಕ್ ಮಾಹಿತಿ ನೀಡಿದರು. ತುಮಕೂರು ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಸೋಮವಾರ ಮಧ್ಯಾಹ್ನ 12.45 ರ ಸಮಯದಲ್ಲಿ ಅವರು ಮಹಿಳೆಯ ಭೀಕರ ಹತ್ಯೆಯ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿರುವ ವಿಚಾರವನ್ನ ತಿಳಿಸಿದರು. ಈ ಪ್ರಕರಣದಲ್ಲಿ ಭೀಕರವಾಗಿ ಹತ್ಯೆಯಾದವರು ತುಮಕೂರು ತಾಲೂಕಿನ ಬೆಳ್ಳಾವಿ ಗ್ರಾಮದ ಬಸವರಾಜು ಅವರ ಪತ್ನಿ 42 ವರ್ಷದ ಲಕ್ಷ್ಮಿ ದೇವಮ್ಮ.