ಮಂಡ್ಯ ಜಿಲ್ಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಭರದಿಂದ ಸಾಗಿದ್ದು, ಕೆ.ಎಂ ದೊಡ್ಡಿಯ ಚಾಂಷುಗರ್ ಕಾರ್ಖಾನೆ ನೌಕರರು ಕಬ್ಬಿನಿಂದ ಗಣೇಶ ಮೂರ್ತಿ ಪ್ರತಿಷ್ಠಾಷಿಸಿ ಗಮನ ಸೆಳೆದಿದ್ದಾರೆ. ಬುಧವಾರ ಮಧ್ಯಾಹ್ನ ಕೆ.ಎಂ ದೊಡ್ಡಿಯ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕಚೇರಿ ಆವರಣದಲ್ಲಿ ಪೂರ್ಣ ಕಬ್ಬಿನಿಂದ ನಿರ್ಮಿತವಾದ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೌರಿ ಗಣೇಶ ಸಣ್ಣ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬದ ಸಂಭ್ರಮಕ್ಕಾಗಿ ಹಾಗೂ ಕಬ್ಬಿನ ಮಹತ್ವ ಸಾರುವ ನಿಟ್ಟಿನಲ್ಲಿ ಕಲಾವಿದರ ಸಹಕಾರದೊಂದಿಗೆ ಗಣೇಶ ಮೂರ್ತಿ ವಿನ್ಯಾಸಗೊಳಿಸಿರುವುದಾಗಿ ತಿಳಿಸಿದ್ದಾರೆ. ಕಬ್ಬಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸುತ್ತಿದ್ದಾರೆ.