ಹಳಿಯಾಳ : ಪಟ್ಟಣದ ಜವಳಿ ಗಲ್ಲಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವೋಲ್ವೋ ಗ್ರೂಪ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅನುದಾನದಲ್ಲಿ ಸ್ಥಾಪಿಸಲಾದ STEM ಲ್ಯಾಬ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಹಾಗೂ ಗಣಿತ ಪ್ರಯೋಗಾಲಯ)ನ ಉದ್ಘಾಟನೆಯನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಇಂದು ಶನಿವಾರ ಬೆಳಗ್ಗೆ 11:30 ಗಂಟೆ ಸುಮಾರಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆಯವರು ಈ ಲ್ಯಾಬ್ ನಿಂದ ವಿದ್ಯಾರ್ಥಿನಿಯರು ನವೀನ ತಂತ್ರಜ್ಞಾನಗಳನ್ನು ಅರಿಯಲು, ವೈಜ್ಞಾನಿಕ ಚಿಂತನೆ ಹಾಗೂ ಪ್ರಾಯೋಗಿಕ ದಕ್ಷತೆಗಳನ್ನು ಬೆಳೆಸಿಕೊಳ್ಳಲು ವಿಪುಲ ಅವಕಾಶ ಸಿಗಲಿದೆ ಎಂದರು.