ರೈತರ ಜಮೀನಿನಲ್ಲಿ ಅಳವಡಿಸಿದ್ದ ಬೋರ್ವೆಲ್ ಕೇಬಲ್ ಸೇರಿದಂತೆ ಇತರ ವಸ್ತುಗಳು ಕಳುವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಣ್ಣೇಗಾಲ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಕಣ್ಣೇಗಾಲ ಗ್ರಾಮದ ಮಹೇಶ್, ರಾಚಪ್ಪ, ಗುರುಮಲ್ಲಪ್ಪ ಎಂಬವರ ಜಮೀನಿಗೆ ನುಗ್ಗಿರುವ ಕಳ್ಳರು ರೈತರು ಪಂಪ್ ಸೆಟ್‌ಗೆ ಅಳವಡಿಸಿದ್ದ ಕೇಬಲ್, ಸ್ಟಾಟರ್ ಗಳನ್ನ ಎಗರಿಸಿದ್ದಾರೆ. ಕರೆಂಟ್ ಇಲ್ಲದ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡಿರುವ ಖದೀಮರು ಸಲೀಸಾಗಿ ಜಮೀನು ಪ್ರವೇಶಿಸಿ ಕೃತ್ಯ ಎಸಗುತ್ತಿದ್ದಾರೆ. ಈಗಾಗಲೇ ಬೆಳೆ ನಷ್ಟದಲ್ಲಿರುವ ರೈತರು ಕೇಬಲ್ ಕಳ್ಳರ ಹಾವಳಿಯಿಂದ ಬೇಸತ್ತು ಹೋಗಿದ್ದು ಕಳ್ಳರ ಬಂಧನಕ್ಕೆ ಪೊಲೀಸರಿಗೆ ಮನವಿ ಮಾಡಿದ್ದಾರೆ.