ಜಿಲ್ಲೆಯಲ್ಲಿ 45 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರಿದ್ದು ಅವರ ಆರ್ಥಿಕ ಮಟ್ಟದ ಸುಧಾರಣೆಗಾಗಿ ಮೀನು ಸಾಕಾಣಿಕೆ ಕೌಶಲ್ಯದ ಕುರಿತಾಗಿ ತರಬೇತಿ ನೀಡಿ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು. ಗುರುವಾರ ಮೀನುಗಾರಿಕೆ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ 2025-26 ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ 177 ಕೆರೆಗಳು ಹಾಗೂ ಗ್ರಾಮ ಪಂಚಾಯಿತಿಯ 688 ಕೆರೆಗಳು ಒಟ್ಟು 865 ಕೆರೆಗಳು ಹಾಗೂ 26 ನದಿ ಭಾಗಗಳು ಮೀನು ಸಾಕಾಣಿಕೆಗೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 2024-25 ನೇ ಸಾಲಿನ 383 ಲಕ್ಷ ಮೀನು ಮರಿಗಳನ್ನು ಬಿತ್ತನೆ ಮಾಡಲಾಗಿದೆ ಎಂದರು.