ಗುಂಡ್ಲುಪೇಟೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಓಪಿಡಿ ಚೀಟಿಗಾಗಿ ರೋಗಿಗಳು ಮಾರುದ್ದ ಸರತಿ ಸಾಲಿನಲ್ಲಿ ಮಂಗಳವಾರ ನಿಂತಿದ್ದರು. ಹೀಗಿದ್ದರೂ ಕೂಡ ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ಮೌನಕ್ಕೆ ಶರಣಾಗಿರುವುದಕ್ಕೆ ರೋಗಿಗಳ ಸಂಬಂಧಿಗಳು ಆಕ್ರೋಶ ಹೊರ ಹಾಕಿದ ಘಟನೆ ಮಂಗಳವಾರ ನಡೆಯಿತು. ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ಮಂದಿ ಹೊರ ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ಪ್ರತಿಯೊಬ್ಬರು ಓಪಿಡಿಯಲ್ಲಿ ಚೀಟಿ ಪಡೆಯುವುದು ಕಡ್ಡಾಯವಾಗಿದೆ. ಇದಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ರೋಗಿಗಳು ಮತ್ತು ಸಂಬಂಧಿಕರು ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.