ಕುಷ್ಠರೋಗ ನಿಯಂತ್ರಣ ಹಾಗೂ ನಿರ್ಮೂಲನೆಗಾಗಿ ಆರೋಗ್ಯ ಇಲಾಖೆ ಹಲವು ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವಿಶೇಷ ಮೇಲ್ವಿಚಾರಕ ಡಾ: ಪ್ರದೀಪ್ತ ಕುಮಾರ್ ನಾಯಕ್ ತಿಳಿಸಿದರು. ಗುರುವಾರ ಮಧ್ಯಾಹ್ನ 3 ಗಂಟೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಕುರಿತ ಸಭೆಯಲ್ಲಿ ಮಾತನಾಡಿದ ಅವರು ಕುಷ್ಠರೋಗ ಪತ್ತೆಯಾದ ಕೂಡಲೇ ಮಲ್ಟಿ ಡ್ರಗ್ ಥೆರಪಿಯನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, ಜನರು ಹೆದರದೆ ತಕ್ಷಣ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ, ಕುಷ್ಠರೋಗದ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖವಾಗುತ್ತದೆ ಎಂದು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.