ಪಾವಗಡ ಪಟ್ಟಣದ ಸರ್ವೆ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರ ವಿರುದ್ಧ ರಾಷ್ಟ್ರೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಮಂಗಳವಾರ ಮಧ್ಯಾಹ್ನ 2 ಗಂಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸೋಲಾರ್ ಕಂಪನಿಗಳ ಪರವಾಗಿ ಅಕ್ರಮವಾಗಿ ಜಮೀನು ಅಳತೆ ಮಾಡಿಕೊಡುವುದು, ರೈತರಿಂದ ದಾಖಲೆಗಳಿಗೆ ಲಂಚ ಬೇಡುವುದು, ಕಚೇರಿಯ ಸಮಯ ಪಾಲಿಸದೆ ಕರ್ತವ್ಯ ಲೋಪ ಎಸಗುವುದು ಸೇರಿದಂತೆ ಹಲವು ಆರೋಪಗಳನ್ನು ರೈತರು ಮಾಡಿದರು. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ, ವರ್ಗಾವಣೆ ಮಾಡಿ, ಲೋಕಾಯುಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಕಿಸಾನ್ ಸಂಘದ ಅಧ್ಯಕ್ಷ ಕೃಷ್ಣ ರಾವ್ ಎಚ್ಚರಿಸಿದರು.