ಮನುಷ್ಯ ಧರ್ಮವನ್ನು ಮೂಲವಾಗಿಟ್ಟುಕೊಂಡು ಮೈಸೂರು ಅರಸರು ಹಾಗೂ ಅವರ ವಂಶಸ್ಥರು ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಜಾತ್ಯಾತೀತ, ಧರ್ಮಾತೀತವಾಗಿ ಕರ್ನಾಟಕವನ್ನು ಕಟ್ಟಿದ ಇತಿಹಾಸ ಅರಸು ಸಮುದಾಯಕ್ಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಣ್ಣಿಸಿದರು. ನಗರದ ಅರಮನೆ ಮೈದಾನದಲ್ಲಿ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದ ಅರಸು ಅಸೋಸಿಯೇಷನ್‌ನ ಸುವರ್ಣ ಮಹೋತ್ಸವದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಅರಸು ಸಮುದಾಯವು ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ ಈ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆ ಬಹು ದೊಡ್ಡದು. ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪರಾಜಮ್ಮಣ್ಣಿ, ಜಯಚಾಮರಾಜೇಂದ್ರ ಒಡೆಯರ್ ಅವರು ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.