ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಮೂವರು ಶ್ರೀಲಂಕಾದ ಪ್ರಜೆಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೆಲೆಸಿದ್ದ ಮೂವರನ್ನ ವಶಕ್ಕೆ ಪಡೆಯಲಾಗಿದ್ದು, ವಿದೇಶಿಗರ ಕಾಯ್ದೆಯಡಿ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಸೆಪ್ಟೆಂಬರ್ 29ರಂದು ಬೆಳಿಗ್ಗೆ 11:30ಕ್ಕೆ ಮಾಹಿತಿ ನೀಡಿದ ಪೊಲೀಸರು, 'ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ 2024ರಲ್ಲಿ ಜಾಫ್ನಾದಿಂದ ಬೋಟ್ ಮೂಲಕ ತಮಿಳುನಾಡಿನ ರಾಮೇಶ್ವರಂಗೆ ಬಂದಿದ್ದ ಆರೋಪಿಗಳು,ಅಲ್ಲಿದ್ದ ವಿದೇಶಿ ಮೂಲದ ಮತ್ತೋರ್ವ ವ್ಯಕ್ತಿಯ ನೆರವು ಪಡೆದು ಬೆಂಗಳೂರು ತಲುಪಿದ್ದರು.ನಂತರ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದರು' ಎಂದರು.