ಸ್ಥಳಿಯ ಸಂಸ್ಥೆಗಳ ಚುನಾವಣೆಯ ಮತದಾನ ಪ್ರಕ್ರಿಯೆಯನ್ನ ಬ್ಯಾಲೆಟ್ ಮೂಲಕ ನಡೆಸುವುದರಲ್ಲಿ ತಪ್ಪೇನಿಲ್ಲ ಎಂದು ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸೆಪ್ಟೆಂಬರ್ 11ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪರಿಷತ್ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಅವರು ಮಾತನಾಡಿದರು. "ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ನೀಡಬೇಕೆಂದು ಬಿಜೆಪಿ ಅಧಿಕಾರಾವಧಿಯಲ್ಲೇ ಕಾನೂನು ರಚಿಸಿದ್ದರು. ಚುನಾವಣಾ ಆಯೋಗದ ಕಾನೂನಿನಲ್ಲಿಯೇ ಅದಕ್ಕೆ ಅವಕಾಶವಿದೆ. ನಮ್ಮ ಕಾನೂನು ಸಚಿವರು ಅದೇ ಪ್ರಸ್ತಾವನೆಯನ್ನ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ" ಎಂದು ಅವರು ತಿಳಿಸಿದರು.