ಬೆಂಗಳೂರು: ಒಂದು ದೇಶ ಒಂದು ಚುನಾವಣೆಯು ಈ ಕಾಲಘಟ್ಟದಲ್ಲಿ ಅತ್ಯಗತ್ಯವಾಗಿದೆ. ಇದರಿಂದ ರಾಜ್ಯ ಮತ್ತು ದೇಶಕ್ಕೆ ಒಳಿತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಒಂದು ದೇಶ ಒಂದು ಚುನಾವಣೆ ಕುರಿತು ವಿದ್ಯಾರ್ಥಿ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಆಡಳಿತ ಸುಧಾರಣೆ ಜೊತೆಗೆ ಸಾವಿರಾರು ಕೋಟಿ ಹಣವನ್ನು ಉಳಿಸುವ ಕ್ರಮ ಇದು ಎಂದು ಮೆಚ್ಚುಗೆ ಸೂಚಿಸಿದರು. ಕೆಟ್ಟ ವಿಚಾರಗಳು ಬಹಳ ಬೇಗ ಜನರನ್ನು ತಲುಪುತ್ತವೆ. ಒಳ್ಳೆಯ ವಿಚಾರ ಜನರನ್ನು ತಲುಪಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಲ್ಲಿ ಈ ಒಳ್ಳೆಯ ವಿಚಾರದ ಕುರಿತು ಜಾಗೃತಿ ಮೂಡಿಸಬೇಕು ಎಂದರು.