ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಬೆಂಗಳೂರು ನಗರ ವ್ಯಾಪ್ತಿಯ ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶಿಸಿದ್ದಾರೆ. ಜಿಬಿಎ ಅಡಿಯಲ್ಲಿ ರಚನೆಯಾಗಿರುವ ನೂತನ ಪಾಲಿಕೆಗಳಿಗೆ ಉಸ್ತುವಾರಿ ಸಚಿವರ ನೇಮಕದ ಕುರಿತು ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಮಂತ್ರಿಗಳು ಎಂದ ಮೇಲೆ ಕೇವಲ ತಮ್ಮ ಕ್ಷೇತ್ರಗಳ ಕೆಲಸ ಮಾತ್ರ ನೋಡುವುದಷ್ಟೇ ಅಲ್ಲ. ಇಡೀ ಜಿಲ್ಲೆ ಕಡೆ ಗಮನಹರಿಸಬೇಕು. ಕೆಲವು ಕಡೆ ನಾವು ಸೋತಿರುವ ಕ್ಷೇತ್ರಗಳಿವೆ. ಆ ಕ್ಷೇತ್ರಗಳಲ್ಲಿ ಸಮನ್ವಯತೆ ಸಾಧಿಸಬೇಕು. ಹೀಗಾಗಿ ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.